ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!

ಸೆಪ್ಟೆಂಬರ್ 30, 1990 ಕನ್ನಡ ಚಿತ್ರರಂಗ ಮತ್ತು ರಂಗಭೂಮಿಗೆ ಕರಾಳ ದಿನ. ಕ್ರಿಯಾಶೀಲ ನಿರ್ದೇಶಕ, ನಟ ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಿನ. ಚಿತ್ರಾಪುರ ಮಠದ ಮಾತಾಜಿ ಅವರು ನಿಮ್ಮ ಪುತ್ರರಲ್ಲೊಬ್ಬನಿಗೆ ವಿಜಯದಶಮಿ ಹಬ್ಬದ ದಿನ ಗಂಡಾಂತರ ಕಾದಿದೆ (''ವಿಜಯ ದಶಮಿಯಂದು ದುರ್ಗೆ ನಿಮ್ಮ ಮನೆಗೆ ಬರುತ್ತಾಳೆ'' ) ಎಂದು ಭವಿಷ್ಯ ನುಡಿದಿದ್ದರಂತೆ. ಹೀಗೆಂದು ಶಂಕರ್ ನಾಗ್ ಅವರ ಸಾವಿನ ರಹಸ್ಯವನ್ನು ಅವರ ಸಹೋದರ, ಹಿರಿಯ ನಟ ಅನಂತನಾಗ್ ಬಿಚ್ಚಿಟ್ಟಿದ್ದಾರೆ.

''ನಮ್ಮ ತಂದೆ ಚಿತ್ರಾಪುರ ಮಠದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಮೃತಪಟ್ಟ ನಂತರ ನಮ್ಮ ತಾಯಿ ಚಿತ್ರಾಪುರ ಮಠದಲ್ಲೇ ಉಳಿದುಕೊಂಡಿದ್ದರು. 1988ರಲ್ಲಿ ವಿಜಯದಶಮಿ ಹಬ್ಬದ ಹಿಂದಿನ ದಿನ ನಮ್ಮ ತಾಯಿ ಕೂಡಲೆ ಮನೆಗೆ ಬರಬೇಕು ಎಂದು ತಿಳಿಸಿದರು. ಹಾಗೆಯೇ ಶಂಕರ್ ನನ್ನು ಜೊತೆಯಲ್ಲಿ ಕರೆತರಲು ತಿಳಿಸಿದ್ದರು. ಇಬ್ಬರೂ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಬರಲು ಸಾಧ್ಯವಿಲ್ಲ ಎಂದು ಅಮ್ಮನಿಗೆ ತಿಳಿಸಿದೆವು. ಆದರೆ ಅಮ್ಮ ಬರಲೇ ಬೇಕು ಎಂದು ಪಟ್ಟು ಹಿಡಿದರು. ಹಾಗಾಗಿ ನಾವು ಹೊರಡಲೇ ಬೇಕಾಯಿತು'' ಎಂದು ಅನಂತ್ ತಮ್ಮ ಹಳೆಯ ನೆನಪುಗಳನ್ನು ಆಂಗ್ಲ ಪತ್ರಿಕೆಯೊಂದರ ಜತೆ ಹಂಚಿಕೊಂಡಿದ್ದಾರೆ.

''ಅವರು ನಮ್ಮನ್ನೇಕೆ ಬಲವಂತ ಮಾಡುತ್ತಿದ್ದಾರೆ. ಬಹುಶಃ ಹಬ್ಬವನ್ನು ನಮ್ಮೊಂದಿಗೆ ಆಚರಿಸಲು ಇರಬೇಕು ಎಂದುಕೊಂಡೆವು. ಆದ ಕಾರಣ ನಾನು ಮತ್ತು ಶಂಕರ್ ಹೊರಟೆವು. ಆದರೆ ನನ್ನನ್ನು ಬೆಂಗಳೂರಿನಲ್ಲೇ ಉಳಿದುಕೊಳ್ಳಲು ತಿಳಿಸಿದ್ದರು. ಕಾರಣ ನಿನಗೆ ಗಂಡಾಂತರ ಇದೆ ನೀನು ಬರುವುದು ಬೇಡ; ಎಲ್ಲೂ ಹೋಗಬೇಡ ಮನೆಯಲ್ಲೇ ಇರು ಎಂದು ಅಮ್ಮ ಆಜ್ಞೆ ಮಾಡಿದ್ದರು. ಹಾಗಾಗಿ 1990ರಲ್ಲಿ ಶಂಕರ್ ತನ್ನ ಪತ್ನಿ ಮತ್ತು ಮಗಳೊಂದಿಗೆ ಹೊರಟು ಅಮ್ಮನ ಜತೆಗೆ ಚಿತ್ರಾಪುರ ಮಠದಲ್ಲೇ ಉಳಿದುಕೊಂಡು ಅಲ್ಲೇ ಹಬ್ಬವನ್ನು ಆಚರಿಸಿಕೊಂಡಿದ್ದ.''

''ಹಬ್ಬ ಮುಗಿದ ಮರುದಿನ ಶಂಕರ್ ಅಮ್ಮನಿಗೆ ಹೇಳದೆ ಕೇಳದೆ ಹೊರಟು ಬಿಟ್ಟಿದ್ದ. ನಂತರ ನನಗೆ ಬಂದ ದೂರವಾಣಿ ಕರೆಯಲ್ಲಿ ಶಂಕರ್ ಗೆ ಅಪಘಾತವಾಗಿದೆ ಎಂದು ತಿಳಿಯಿತು. ನಾನು ಕೂಡಲೆ ಅಮ್ಮನಿಗೆ ಫೋನ್ ಮಾಡಿದೆ, ಅವರು ಆಘಾತಕ್ಕೊಳಗಾಗಿದ್ದರು. ''ನಿನಗಲ್ಲ ಗಂಡಾಂತರ ಇದ್ದದ್ದು ಶಂಕರ್ ಗೆ'' ಎಂದು ಅಮ್ಮ ಕಣ್ಣೀರಿಟ್ಟಿದ್ದರು. ಗಂಡಾಂತರ ಕಾದಿರುವುದು ನನಗೇ ಎಂದು ಅಮ್ಮ ತಪ್ಪಾಗಿ ತಿಳಿದ್ದರು. ನನ್ನನ್ನು ಮನೆಯಲ್ಲೇ ಇರಲು ಹೇಳಿ ಶಂಕರ್ ನನ್ನು ಹಬ್ಬಕ್ಕಾಗಿ ಕರೆಸಿಕೊಂಡಿದ್ದರು'' ಎಂದು ಅನಂತನಾಗ್ ಅಂದಿನ ತಮ್ಮ ನೋವನ್ನು ಪತ್ರಿಕೆಯೊಂದಿಗೆ ತೋಡಿಕೊಂಡಿದ್ದಾರೆ.

No comments: