ಶಂಕರ್ ನಾಗ್ ಪತ್ನಿಗೆ ರು.21.6 ಲಕ್ಷ ನಷ್ಟಭರ್ತಿ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಂಗಭೂಮಿ ಕಲಾವಿದ ಶಂಕರ್ ನಾಗರಕಟ್ಟೆ(ಶಂಕರ್ ನಾಗ್) ಮೃತಪಟ್ಟು 18 ವರ್ಷಗಳು ಕಳೆದುಹೋದವು. ದಾವಣಗೆರೆ ಜಿಲ್ಲೆ ಆನಗೋಡು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 1990ರ ಸೆಪ್ಟೆಂಬರ್ 30ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ಸಾವನ್ನಪ್ಪಿದ್ದರು. ಪತ್ನಿ ಅರುಂಧತಿ ನಾಗ್ ಹಾಗೂ ಪುತ್ರಿ ಕಾವ್ಯಾ ಅವರು ಗಾಯಗೊಂಡು ಪ್ರಾಣಾಪಯದಿಂದ ಪಾರಾಗಿದ್ದರು.

ಈ ಅಪಘಾತ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು.ಶಂಕರ್ ನಾಗ್ ಅಪಘಾತ ಪ್ರಕರಣವನ್ನು ಕರ್ನಾಟಕ ಉಚ್ಛನ್ಯಾಯಾಲಯದ ವಿಭಾಗೀಯ ಪೀಠ ಇದೀಗ ಇತ್ಯರ್ಥಪಡಿಸಿದೆ. ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್ ಮತ್ತು ಪುತ್ರಿ ಕಾವ್ಯಾ ಅವರಿಗೆ ರು.21.6 ಲಕ್ಷ ಪರಿಹಾರ ನೀಡುವಂತೆ ಲಾರಿ ಮಾಲೀಕ ಮತ್ತು ವಿಮಾ ಕಂಪನಿಗೆ ಹೈಕೋರ್ಟ್ ಆದೇಶ ನೀಡಿದೆ.

ಈ ಘಟನೆಗೆ ಸಂಬಂಧಿಸಿದಂತೆ ಲಾರಿ ಮಾಲೀಕ ಮತ್ತು ವಿಮಾ ಕಂಪನಿ ವಿರುದ್ಧ ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ (ಎಂಎಸಿಟಿ)ದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಕರಣ ಅರುಂಧತಿ ನಾಗ್ ಮತ್ತು ಕಾವ್ಯಾ ಅವರಿಗೆ ರು.23 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು.

ಎಂಎಸಿಟಿ ನ್ಯಾಯಾಲಯದ ವಿರುದ್ಧ ಅರುಂಧತಿ ನಾಗ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಧೀಶರಾದ ಶ್ರೀಧರ್ ರಾವ್ ಮತ್ತು ಸತ್ಯನಾರಾಯಣ ಅವರಿದ್ದ ವಿಭಾಗೀಯ ಪೀಠ ಪ್ರಕರಣದ ವಿಚಾರಣೆ ನಡೆಸಿ ರು.21.6 ಲಕ್ಷ ಪರಿಹಾರ ನೀಡುವಂತೆ ಲಾರಿ ಮಾಲೀಕ ಮತ್ತು ವಿಮಾ ಕಂಪನಿಗೆ ಆದೇಶ ನೀಡಿದ್ದಾರೆ.

ಶಂಕರನಾಗ್ ಮೃತಪಡುವ ವೇಳೆಗೆ ರಾಜ್ಯದಲ್ಲಿ ಅವರು ಜನಪ್ರಿಯ ನಟರಾಗಿದ್ದರು. ಅವರಿಗೆ ಹೆಚ್ಚಿನ ಸಂಭಾವನೆ ಸಿಗುತ್ತಿತ್ತು. ರು.23 ಲಕ್ಷ ಪರಿಹಾರ ನಮಗೆ ಸಾಲದು, ರು.1.25 ಕೋಟಿ ಪರಿಹಾರ ಕೊಡಿಸಬೇಕೆಂದು ಅರುಂಧತಿ ನಾಗ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅರುಂಧತಿ ನಾಗ್ ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿ ಎಂಎಸಿಟಿ ನ್ಯಾಯಾಲಯ ನೀಡಿದ್ದ ಪರಿಹಾರಕ್ಕಿಂತಲೂ ರು.2 ಲಕ್ಷಕಡಿಮೆ ನೀಡುವಂತೆ ಆದೇಶಿಸಿದೆ

No comments: