ವೃದ್ಧಾಪ್ಯವು 27ರ ವಯಸ್ಸಿಗೆ ಆರಂಭವಾಗುತ್ತದೆ

ನಂಬಿದರೆ ನಂಬಿ; ಬಿಟ್ಟರೆ ಬಿಡಿ. ನಿಮ್ಮ ವೃದ್ಧಾಪ್ಯ 27ಕ್ಕೇ ಆರಂಭವಾಗುತ್ತೆ ಅಂತಿದ್ದಾರೆ ಸಂಶೋಧಕರು. ಜನರ ಮಾನಸಿಕ ಸಾಮರ್ಥ್ಯವು 27ರ ನಂತರ ಕಳೆಗುಂದುತ್ತಾ ಬರುತ್ತದೆ. ಈ ಸಾಮರ್ಥ್ಯವು 22ರ ಹರೆಯದಲ್ಲಿ ಉತ್ತುಂಗಕ್ಕೇರುತ್ತದೆ ಎಂಬುದಾಗಿಯೂ ಅವರು ಹೇಳುತ್ತಾರೆ.

ಆರೋಗ್ಯವಂತ, ವಿದ್ಯಾವಂತ ವಯಸ್ಕರ ಮಾನಸಿಕ ಸಾಮರ್ಥ್ಯವು ಅವರ 20ರಿಂದ 30ರ ಕಾಲಘಟ್ಟದಲ್ಲಿ ಕುಸಿಯಲು ಆರಂಭಿಸುತ್ತದೆ ಎಂದು ಮುಂಚೂಣಿ ಸಂಶೋಧಕ ಪ್ರೋ| ತಿಮೋತಿ ಸಲ್ತೋಸ್ ಅವರನ್ನು ಉಲ್ಲೇಖಿಸಿ ಡೇಲಿ ಮೇಲ್ ವರದಿ ಮಾಡಿದೆ. ಅಧ್ಯಯನ ತಂಡವು ಸಂಶೋಧನೆಗಾಗಿ, 18ರಿಂದ 60ರ ಹರೆಯದ 2,000 ಪುರುಷ ಮತ್ತು ಮಹಿಳೆಯರನ್ನು ಬಳಸಿಕೊಂಡಿದ್ದು, ಏಳು ವರ್ಷಗಳ ಅಧ್ಯಯನದ ಬಳಿಕ ಈ ನಿರ್ಧಾರಕ್ಕೆ ಬಂದಿದೆ.

ಈ ಅಧ್ಯಯನಕ್ಕೆ ಒಳಗೊಂಡಿದ್ದವರಲ್ಲಿ ಹೆಚ್ಚಿನವರು ಸುಶಿಕ್ಷಿತರು ಹಾಗೂ ಉತ್ತಮ ಆರೋಗ್ಯವನ್ನು ಹೊಂದಿದವರಾಗಿದ್ದಾರೆ. ಅವರಿಗೆ ವಿಶುವಲ್ ಪಝಲ್ಗಳನ್ನು ಬಿಡಿಸುಂತೆ, ಶಬ್ದಗಳನ್ನು ನೆನಪಿಸಿಕೊಳ್ಳಲು ಮತ್ತು ಕಥೆಯ ವಿವರಗಳನ್ನು ನೆನಪಿಸುವ ಹಾಗೂ ಚಿಹ್ನೆಗಳು ಮತ್ತು ಅಕ್ಷರಗಳಲ್ಲಿ ವಿನ್ಯಾಸಗಳನ್ನು ಪತ್ತೆ ಹಚ್ಚುವಂತಹ ಪರೀಕ್ಷೆಗೆ ಒಡ್ಡಲಾಗಿತ್ತು. ಇಂತಹುದೇ ಪರೀಕ್ಷೆಗಳನ್ನು ಮಾನಸಿಕ ಅಸಾಮರ್ಥ್ಯಗಳು, ಡಿಮೆನ್ಶಿಯಾ ಸೇರಿದಂತೆ ಮಾನಸಿಕ ಶಕ್ತಿಯ ಕುಂದುವಿಕೆಯನ್ನು ಪತ್ತೆಹಚ್ಚಲು ಬಳಸಲಾಗುತ್ತದೆ.

ಈ ಅಧ್ಯಯನ ಕಂಡುಕೊಂಡ ಪ್ರಕಾರ ಉತ್ತಮ ಕಾರ್ಯಕ್ಷಮತೆ ತೋರಿದವರು 22ರ ಹರೆಯದ ವ್ಯಕ್ತಿಗಳು. ಆದರೆ ಇದು 27ರ ಹರೆಯದಲ್ಲಿ ಗಮನೀಯವಾಗಿ ಕುಸಿತಗೊಂಡು ಆಲೋಚನಾ ವೇಗ ಹಾಗೂ ಗಾತ್ರಗಳ ವೀಕ್ಷಣೆಯ ವೇಗವೂ ಕುಂಠಿತಗೊಳ್ಳುತ್ತದೆ ಎಂದು ಅಧ್ಯಯನ ಹೇಳಿದೆ.

ಸರಾಸರಿ 37ರ ಹರೆಯದಲ್ಲಿ ನೆನಪಿನ ಶಕ್ತಿ ಕುಂಠಿತಗೊಳ್ಳುತ್ತದೆ. 42ರ ಹರೆಯದಲ್ಲಿ ಇದು ಇನ್ನಷ್ಟು ಹೆಚ್ಚುತ್ತದೆ ಎಂದು ವರ್ಜೀನಿಯಾ ವಿಶ್ವವಿದ್ಯಾನಿಲಯದ ಅಧ್ಯಯನ ಹೇಳಿದೆ.

No comments: